ಏಕರೂಪ ನಾಗರಿಕ ಸಂಹಿತೆ
ಏಕರೂಪ ನಾಗರಿಕ ಸಂಹಿತೆಯನ್ನು ರಾಷ್ಟ್ರದಲ್ಲಿ ಜಾರಿ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವು ವ್ಯಕ್ತಪಡಿಸಬೇಕು ಎಂದು ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಇದಕ್ಕಾಗಿ ಅಕ್ಟೋಬರ್ 12ರಂದು ಮೂರು ವಾರಗಳ ಗಡುವನ್ನು ಸರ್ಕಾರಕ್ಕೆ ನೀಡಲಾಗಿದೆ. ‘ವಿಚ್ಛೇದನಕ್ಕಾಗಿ ಕ್ರೈಸ್ತ ದಂಪತಿಗಳು ಕನಿಷ್ಠ ಎರಡು ವರ್ಷ ಕಾಯಬೇಕು. ಆದರೆ ಇತರ ಧರ್ಮದವರಿಗೆ ಈ ಅವಧಿ ಒಂದು ವರ್ಷವಿದೆ. ಈ ತಾರತಮ್ಯ ಏಕೆ?’ ಎಂದು ಪ್ರಶ್ನಿಸಿರುವಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಕೇಂದ್ರದ ನಿಲುವನ್ನು ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಶಿವಕೀರ್ತಿ ಸಿಂಗ್ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ.
ವಿವಿಧ ಧರ್ಮಗಳಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳಿಂದಾಗಿ ‘ಪೂರ್ಣ ಗೊಂದಲಮಯ’ ಸ್ಥಿತಿ ಇದೆ. ಏಕರೂಪ ನಾಗರಿಕ ಸಂಹಿತೆಯನ್ನು ನಾವು ರೂಪಿಸಬೇಕಿದೆ. ಈ ವಿಚಾರ ಏನಾಯಿತು? ನೀವು (ಸರ್ಕಾರ) ಮಾಡಬಯಸಿದಲ್ಲಿ ಅದನ್ನು ಮಾಡಬೇಕು. ಯಾಕೆ ಅದನ್ನು ರೂಪಿಸಿ ಅನುಷ್ಠಾನಗೊಳಿಸಬಾರದು’ ಎಂದು ಪೀಠ ಪ್ರಶ್ನಿಸಿದೆ. ಸುಪ್ರೀಂಕೋರ್ಟ್‌ನ ಈ ಮಾತುಗಳು, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿಗೆ ನಿಜಕ್ಕೂ ವರದಾನ. ಏಕೆಂದರೆ, ಉದ್ದಕ್ಕೂ ಏಕರೂಪ ನಾಗರಿಕ ಸಂಹಿತೆಯನ್ನು ಬಿಜೆಪಿ ಬೆಂಬಲಿಸಿಕೊಂಡೇ ಬಂದಿದೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಇರುವ ಮುಖ್ಯ ವಿಚಾರಗಳಲ್ಲಿ ಇದೂ ಒಂದು. ಹೀಗಾಗಿ ಈ ಭರವಸೆ ಈಡೇರಿಸುವ ಅವಕಾಶ ಆಡಳಿತ ಪಕ್ಷಕ್ಕೆ ಈಗ ಸಿಕ್ಕಿದಂತಾಗಿದೆ.
ಆದರೆ ಸದ್ಯದ ಸಂದರ್ಭದಲ್ಲಿ ವಿವಾದಾತ್ಮಕ ವಿಚಾರಗಳಾದ ಘರ್ ವಾಪ್ಸಿ, ಗೋಮಾಂಸ ನಿಷೇಧ, ದಾದ್ರಿ ಹತ್ಯೆ ವಿಚಾರಗಳಲ್ಲಿ ಹಿಂದುತ್ವದ ತುಂಡು ಸಂಘಟನೆಗಳನ್ನು ನಿಯಂತ್ರಣದಲ್ಲಿಡಲು ವಿಫಲವಾಗಿರುವ ಆರೋಪವನ್ನು ಬಿಜೆಪಿ ಎದುರಿಸುತ್ತಿದೆ. ಈಗ, ರಾಜಕೀಯವಾಗಿ ಸೂಕ್ಷ್ಮವೆನಿಸಿದ ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರದಲ್ಲಿ ಬಿಜೆಪಿ ಮುತುವರ್ಜಿ ವಹಿಸುವುದೆ ಎಂಬುದು ಪ್ರಶ್ನೆ. ಅಧಿಕಾರಕ್ಕೆ ಬಂದಾಗಲಿಂದ ಈವರೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮೌನವಾಗಿಯೇ ಇದೆ.
‘ರಾಷ್ಟ್ರೀಯ ಏಕತೆಗೆ ಏಕರೂಪ ನಾಗರಿಕ ಸಂಹಿತೆ ಅಗತ್ಯವಾದುದು’ ಎಂದು ಕೇಂದ್ರ ಕಾನೂನು ಸಚಿವ ಸದಾನಂದ ಗೌಡರೇನೊ ಸುಪ್ರೀಂಕೋರ್ಟ್ ನಿರ್ದೇಶನದ ನಂತರ ಪ್ರತಿಕ್ರಿಯಿಸಿದ್ದಾರೆ. ಆದರೆ, ‘ಇದು ಸೂಕ್ಷ್ಮ ವಿಚಾರ. ಈ ವಿಚಾರದಲ್ಲಿ ಒಮ್ಮತ ಮೂಡಿಸಲು ವಿಸ್ತೃತ ಸಮಾಲೋಚನೆಗಳ ಅಗತ್ಯವಿದೆ. ವಿವಿಧ ವೈಯಕ್ತಿಕ ಕಾನೂನು ಮಂಡಳಿಗಳು ಸೇರಿದಂತೆ ಸಂಬಂಧಿಸಿದ ಎಲ್ಲರ ಜೊತೆ ಚರ್ಚೆ ಅಗತ್ಯವಿದೆ. ಇದಕ್ಕೆ ಸಾಕಷ್ಟು ಸಮಯ ಹಿಡಿಯಬಹುದು’ ಎಂಬಂತಹ ಮಾತುಗಳನ್ನೂ ಅವರು ಆಡಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯ ಚರ್ಚೆ ಇಂದು ನೆನ್ನೆಯದಲ್ಲ. ಏಕರೂಪ ನಾಗರಿಕ ಸಂಹಿತೆಯನ್ನು ನಾಗರಿಕರಿಗೆ ಒದಗಿಸಿಕೊಡಲು ಪ್ರಭುತ್ವ ಪ್ರಯತ್ನಿಸುತ್ತದೆ ಎಂದು ಸಂವಿಧಾನದ 44ನೇ ವಿಧಿ ಹೇಳುತ್ತದೆ. ಸಂವಿಧಾನದ 44ನೇ ವಿಧಿ, ರಾಜ್ಯ ನೀತಿಯ ಮಾರ್ಗದರ್ಶಿ ತತ್ವಗಳಲ್ಲಿ ಸೇರಿದೆ. ಮಾರ್ಗದರ್ಶಿ ತತ್ವಗಳ ಜಾರಿ ಕಡ್ಡಾಯ ಏನಲ್ಲ.ಆದರೆ ಇದು ಸಂವಿಧಾನ ಜಾರಿಗೆ ಮಾರ್ಗದರ್ಶಿಯಾಗಿ ಅಥವಾ ಮಾದರಿ ಅಂಶವಾಗಿ ಇರುತ್ತದೆ. ಇದನ್ನು ಯಾವುದೇ ನ್ಯಾಯಾಲಯ ಜಾರಿಗೊಳಿಸುವುದು ಸಾಧ್ಯವಿಲ್ಲ. ಆದರೆ, ಅಲ್ಲಿರುವ ತತ್ವಗಳು ರಾಷ್ಟ್ರದ ಆಡಳಿತಕ್ಕೆ ಮೂಲಭೂತವಾದವು. ಕಾನೂನುಗಳನ್ನು ಮಾಡುವಾಗ ಈ ತತ್ವಗಳನ್ನು ಅಳವಡಿಸುವ ಕರ್ತವ್ಯ ಪ್ರಭುತ್ವದ್ದಾಗಿರುತ್ತದೆ ಎಂಬುದನ್ನು ಸಂವಿಧಾನದ 37ನೇ ವಿಧಿ ಸ್ಪಷ್ಟ ಪಡಿಸುತ್ತದೆ.
ಆದರೆ ಈವರೆಗೆ ರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆ ಮರೀಚಿಕೆಯಾಗಿಯೇ ಉಳಿದುಕೊಂಡುಬಂದಿದೆ. ಎಲ್ಲಾ ನಾಗರಿಕರಿಗೂ ಅಪರಾಧ ಕಾನೂನು ಒಂದೇ ಇದೆ. ಆದರೆ ವಿವಾಹ, ಕುಟುಂಬಕ್ಕೆ ಸಂಬಂಧಿಸಿದ ನಾಗರಿಕ ಕಾನೂನಿನಲ್ಲಿ, ವಿವಿಧ ಧರ್ಮಗಳು ಹಾಗೂ ಸಮುದಾಯಗಳಿಗೆ ಅವರದೇ ಆಚರಣೆಗಳನ್ನು ಅನುಸರಿಸಲು ಅವಕಾಶ ಇದೆ. ಅನೇಕ ಸಂದರ್ಭಗಳಲ್ಲಿ ಇವು ಮಹಿಳೆಗೆ ಸಂಬಂಧಿಸಿದಂತೆ ತಾರತಮ್ಯದ ನೀತಿಗಳನ್ನು ಹೊಂದಿರುತ್ತವೆ.
1980ರ ದಶಕದ ಮಧ್ಯಭಾಗದಲ್ಲಿ ಅನೇಕ ಧೈರ್ಯವಂತ ಮಹಿಳೆಯರು ವೈಯಕ್ತಿಕ ಕಾನೂನುಗಳ ವಿರುದ್ಧ ದನಿ ಎತ್ತಿದರು. ಉದಾಹರಣೆಗೆ, ಹಿಂದೂ ಉತ್ತರಾಧಿಕಾರ ಕಾಯಿದೆಯಲ್ಲಿ ಬದಲಾವಣೆಗೆ ಲತಾ ಮಿತ್ತಲ್ ಒತ್ತಾಯಿಸಿದರು. ಕುಟುಂಬದ ಆಸ್ತಿಯಲ್ಲಿ ಹಕ್ಕಿನ ಪಾಲಿನಿಂದ ಮಹಿಳೆಯರನ್ನು ವಂಚಿಸಿದ್ದ ಕ್ರೈಸ್ತ ಉತ್ತರಾಧಿಕಾರಿ ಕಾಯಿದೆಯನ್ನು ಮೇರಿ ರಾಯ್ ಪ್ರಶ್ನಿಸಿದ್ದರು. ಶೆಹನಾಜ್ ಷೇಕ್ ಅವರು ಮುಸ್ಲಿಂ ವಿಚ್ಛೇದನ ಕಾನೂನಿನಲ್ಲಿ ಮೂರು ಬಾರಿ ತಲಾಕ್ ಹೇಳುವುದರ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿದ್ದರು.
ಆದರೆ 1985ರಲ್ಲಿ ಶಾ ಬಾನೊ ಪ್ರಕರಣವೆಂದು ಕರೆಯಲಾದ ಪ್ರಕರಣದಲ್ಲಿ, ಮಹಿಳೆ ಹಾಗೂ ಧರ್ಮವೊಂದಕ್ಕೆ ಸೇರಿದವಳಾಗಿ ಅಸ್ಮಿತೆಗಳ ವಿಭಿನ್ನ ದ್ವಂದ್ವಗಳಿಗೆ ಮಹಿಳೆ ಸಿಲುಕುವಂತಾದದ್ದು ಇತಿಹಾಸ. ತನ್ನ ವಕೀಲ ಪತಿಯಿಂದ ಜೀವನಾಂಶ ಕೋರಿ ಮಧ್ಯಪ್ರದೇಶದ ಇಂದೂರಿನ ವೃದ್ಧ ವಿಚ್ಛೇದಿತ ಮುಸ್ಲಿಂ ಮಹಿಳೆ ಶಾ ಬಾನೊ ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ್ದರು. ಆಗಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವೈ.ವಿ. ಚಂದ್ರಚೂಡ್ ಅವರು, ವಿಚ್ಛೇದಿತ ಪತ್ನಿಯರು ಹಾಗೂ ಮಕ್ಕಳಿಗೆ ಪತಿಯಂದಿರು ಜೀವನಾಂಶ ನೀಡಬೇಕೆಂದು ಎತ್ತಿ ಹೇಳುವ ಜಾತ್ಯತೀತ ಕ್ರಿಮಿನಲ್ ಕಾನೂನು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್ ಪಿಸಿ) ಸೆಕ್ಷನ್ 125 ರ ಅಡಿ ಶಾ ಬಾನೊಗೆ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿದ್ದರು.
ಈ ತೀರ್ಪು ಹೊರಬಿದ್ದಿದ್ದು 1985 ರ ಏಪ್ರಿಲ್ 23ರಂದು. ಸರಿಯಾಗಿ 30 ವರ್ಷಗಳು ಕಳೆದುಹೋಗಿವೆ ಈಗ. ಆದರೆ ಶಾ ಬಾನೊ ಪರವಾದ ತೀರ್ಪು ಮುಸ್ಲಿಂ ಧಾರ್ಮಿಕ ನಾಯಕರ ಆಕ್ರೋಶಕ್ಕೆ ಕಾರಣವಾಗಿ ರಾಷ್ಟ್ರದಲ್ಲಿ ದೊಡ್ಡ ವಿವಾದವೇ ಸೃಷ್ಟಿಯಾಗಿಹೋಯಿತು. ಹೀಗಾಗಿ ಮಾಸಿಕ ₹ 179.20 ರಷ್ಟು ಕಡಿಮೆ ಮೊತ್ತದ ಜೀವನಾಂಶ ಕುರಿತಾದ ತಮ್ಮ ಪ್ರತಿಪಾದನೆಯನ್ನು ಶಾ ಬಾನೊ ಸಾರ್ವಜನಿಕವಾಗಿಯೇ ಕೈಬಿಟ್ಟರು. ಶಾ ಬಾನೊವಿನ ಹೋರಾಟ ಪಡೆದುಕೊಂಡ ಈ ನಾಟಕೀಯ ತಿರುವುಗಳು, ನಂತರದ ಘಟನಾವಳಿಗಳು ಬದುಕಿನ ದ್ವಂದ್ವಗಳನ್ನು ಹಾಗೂ ಧಾರ್ಮಿಕ, ರಾಜಕೀಯ ಶಕ್ತಿಗಳ ಪ್ರಾಬಲ್ಯವನ್ನು ಎತ್ತಿ ತೋರಿದವು.
ಈ ಪ್ರಕರಣದ ನೇರ ಪರಿಣಾಮ ಎಂದರೆ 1986ರ ಮುಸ್ಲಿಂ ಮಹಿಳೆ (ವಿಚ್ಛೇದನದ ಹಕ್ಕಿನ ರಕ್ಷಣೆ) ಮಸೂದೆ. ಈ ಹೊಸ ಕಾನೂನು ಸಿಆರ್‌ಪಿಸಿಯ ಸೆಕ್ಷನ್ 125ರಂತಹ ಜಾತ್ಯತೀತ ಕಾನೂನಿನ ಮೊರೆ ಹೋಗುವ ಅವಕಾಶವನ್ನು ಮುಸ್ಲಿಂ ಮಹಿಳೆಯರಿಗೆ ನಿರಾಕರಿಸಿತು. ಈ ವಿಚಾರದ ಹೊಣೆಗಾರಿಕೆಯನ್ನು ವಕ್ಫ್ ಮಂಡಳಿಗೆ ವಹಿಸಲಾಯಿತು. ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು ಮುಸ್ಲಿಂ ಧಾರ್ಮಿಕ ನಾಯಕರ ಒತ್ತಡಗಳಿಗೆ ಮಣಿದರು ಎಂಬಂತಹ ಟೀಕೆಗಳೂ ವ್ಯಕ್ತವಾದವು. ಒಟ್ಟಾರೆ ರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ವಿಚಾರಕ್ಕಂತೂ ತೀವ್ರ ಹಿನ್ನಡೆಯಾಯಿತು.
ವಿವಾದ ತೀವ್ರವಾಗುತ್ತಿದ್ದಂತೆ ಎರಡು ನಿಲುವುಗಳು ಸ್ಪಷ್ಟವಾದವು. ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿದವರನ್ನು ಜಾತ್ಯತೀತ, ಆಧುನಿಕ ಹಾಗೂ ಮಹಿಳಾ ಪರ ಎಂದು ಬಿಂಬಿಸಲಾಯಿತು. ವಿರೋಧಿಸಿದವರನ್ನು ಸಂಪ್ರದಾಯಶೀಲ, ಕೋಮುವಾದಿ ಹಾಗೂ ಮಹಿಳಾ ವಿರೋಧಿ ಎಂದು ಬಿಂಬಿಸಲಾಯಿತು. ಬಲಪಂಥೀಯ ಹಿಂದೂಗಳೂ ಈ ಅವಕಾಶ ಬಳಸಿಕೊಂಡರು. ಏಕರೂಪ ನಾಗರಿಕ ಸಂಹಿತೆ ಬೆಂಬಲಿಗರನ್ನು ರಾಷ್ಟ್ರೀಯವಾದಿಗಳೆಂದು ಬಿಂಬಿಸಲಾಯಿತು. ಈ ವಿಚಾರವನ್ನು ರಾಜಕೀಯ ಗಳಿಕೆಗಳಿಗಾಗಿ ಧಾರ್ಮಿಕ ತೀವ್ರವಾದಿಗಳು ಬಳಸಿಕೊಳ್ಳ ತೊಡಗಿದರು. ನಂತರ ತೀವ್ರಗೊಂಡ ಕೋಮು ರಾಜಕಾರಣ ಹಾಗೂ 1992ರಲ್ಲಿ ಬಾಬ್ರಿ ಮಸೀದಿ ಕೆಡವಿದ್ದರಿಂದ ರಾಷ್ಟ್ರದಾದ್ಯಂತ ನಡೆದ ಗಲಭೆಗಳಿಂದಾಗಿ ಏಕರೂಪ ನಾಗರಿಕ ಸಂಹಿತೆ ಕುರಿತ ಬೇಡಿಕೆಗೆ ಸಂಬಂಧಿಸಿದ ಕಾರ್ಯತಂತ್ರಗಳನ್ನು ಮರು ಆಲೋಚಿಸುವುದು ಮಹಿಳಾ ಸಂಘಟನೆಗಳಿಗೆ ಅನಿವಾರ್ಯವಾಯಿತು.
ಈ ಚರ್ಚೆಯಲ್ಲಿ ತುಂಬಿಕೊಳ್ಳುವ ತೀವ್ರತರದ ರಾಜಕೀಯದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ವೈಯಕ್ತಿಕ ಕಾನೂನುಗಳ ಇತಿಹಾಸವನ್ನೊಮ್ಮೆ ಅವಲೋಕಿಸಬೇಕು. 1770ರ ದಶಕದಲ್ಲಿ, ವಿಭಿನ್ನವಾಗಿದ್ದ ಹಾಗೂ ಪರಸ್ಪರ ವೈರುಧ್ಯಗಳನ್ನೂ ಹೊಂದಿದ್ದ ಧಾರ್ಮಿಕ ಪಠ್ಯಗಳಿಂದ ಹಿಂದೂ ಹಾಗೂ ಇಸ್ಲಾಮಿಕ್ ಕಾನೂನುಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಮೂಲಕ ಸಂಹಿತೆ ರೂಪಿಸುವ ಬೃಹತ್ ಕೆಲಸವನ್ನು ಬ್ರಿಟಿಷರು ಕೈಗೆತ್ತಿಕೊಂಡರು. ಈ ಪ್ರಕ್ರಿಯೆಯಲ್ಲಿ ಅದರಲ್ಲೂ ನ್ಯಾಯಾಲಯಗಳಲ್ಲಿ ವೈಯಕ್ತಿಕ ಕಾನೂನುಗಳ ವ್ಯಾಖ್ಯಾನ ಹಾಗೂ ಅನುಷ್ಠಾನಕ್ಕಾಗಿ ಮೌಲ್ವಿಗಳು ಹಾಗೂ ಪಂಡಿತರ ನೆರವನ್ನೂ ಕೋರಲಾಯಿತು. ಅವರು, ಸಾಮಾಜಿಕ, ವರ್ಗ ಹಾಗೂ ಜಾತಿ ಪೂರ್ವಗ್ರಹಗಳನ್ನೂ ತಮ್ಮೊಂದಿಗೆ ತಂದಿದ್ದು ಸಹಜವಾಗಿಯೇ ಇತ್ತು. ಆದರೆ ಕೆಲವೊಂದು ಆಚರಣೆಗಳು ಅಮಾನುಷ ಹಾಗೂ ಉದಾರವಾದಿ ಚಿಂತನೆಗೆ ವಿರೋಧವಾಗಿದೆಯೆಂದು ಅವುಗಳನ್ನು ಭಾರತದ ಸಮಾಜ ಸುಧಾರಕರ ನೆರವಿನೊಂದಿಗೆ ಬ್ರಿಟಿಷರು ಬಹಿಷ್ಕರಿಸಿದರು.
ಇವುಗಳಲ್ಲಿ ಸತಿ, ಬಾಲ್ಯ ವಿವಾಹ ಹಾಗೂ ವಿಧವಾ ಮರುವಿವಾಹದ ಮೇಲಿನ ನಿಷೇಧಗಳು ಸೇರಿವೆ. ಹಿಂದೂ (ಸಿಖ್ಖರು ಹಾಗೂ ಜೈನರೂ ಒಳಗೊಳ್ಳುತ್ತಾರೆ), ಮುಸ್ಲಿಂ, ಕ್ರೈಸ್ತ ಹಾಗೂ ಪಾರ್ಸಿ– ಈ ನಾಲ್ಕು ಸಮುದಾಯಗಳಿಗೆ ಪ್ರತ್ಯೇಕ ಕಾನೂನುಗಳನ್ನು ರಚಿಸಲಾಯಿತು. ಧಾರ್ಮಿಕ ಹಾಗೂ ಸಾಂಪ್ರದಾಯಿಕ ಸಂಹಿತೆಗಳ ಹೂರಣವಾಗಿರುವ ಈ ಕಾನೂನುಗಳು ಮಹಿಳೆಯರನ್ನು ಪುರುಷನ ಅವಲಂಬಿತಳು ಹಾಗೂ ಅಧೀನ ನೆಲೆಯವಳು ಎಂದೇ ಭಾವಿಸುತ್ತವೆ. ವಿವಾಹದ ನಂತರ ಮಹಿಳೆ ಪತಿ ಮನೆಗೆ ಹೋಗಬೇಕು, ಪತಿಯೇ ಕುಟುಂಬದ ಯಜಮಾನ ಹಾಗೂ ಮಕ್ಕಳ ‘ಸಹಜ’ ಪೋಷಕ ಎಂದು ಭಾವಿಸುತ್ತವೆ. ಆಸ್ತಿಗೆ ಸಂಬಂಧಿಸಿದಂತೆ ಮಹಿಳೆಗೆ ಸಮಾನ ಹಕ್ಕುಗಳಿರುವುದಿಲ್ಲ.
ವೈಯಕ್ತಿಕ ಕಾನೂನುಗಳ ಅಸಂಗತತೆಯನ್ನು ಸಮಾನತೆಯ ಹಕ್ಕು ನೀಡುವ ಸಂವಿಧಾನದ 14ನೇ ವಿಧಿ ಅನ್ವಯ ಪ್ರಶ್ನಿಸಲಾಗುತ್ತದೆ. ವೈಯಕ್ತಿಕ ಕಾನೂನುಗಳಿಂದಾಗಿ ಸಮಾನತೆಯ ಹಕ್ಕಿಗೆ ಧಕ್ಕೆಯೊದಗಿದೆ ಎಂದು ಅನೇಕ ಮಂದಿ ಕೋರ್ಟ್ ಮೊರೆ ಹೋಗಿರುವುದೂ ಉಂಟು. ಎಲ್ಲಾ ಸಂದರ್ಭಗಳಲ್ಲೂ ತಂದೆಯನ್ನೇ ಸಹಜ ಪೋಷಕ ಎಂದು ಪರಿಗಣಿಸುವ ಹಿಂದೂ ಮೈನಾರಿಟಿ ಮತ್ತು ಗಾರ್ಡಿಯನ್ಷಿಪ್ ಕಾಯಿದೆ 1956ರ ಕೆಲವು ಅಂಶಗಳು 14 ನೇ ವಿಧಿಯನ್ನು ಉಲ್ಲಂಘಿಸುತ್ತವೆ ಎಂದು 1999ರಲ್ಲಿ ಗೀತಾ ಹರಿಹರನ್ ವರ್ಸಸ್ ಆರ್‌ಬಿಐ ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ಅರ್ಜಿ ಯಲ್ಲಿ ವಾದಿಸಲಾಗಿತ್ತು. ಆಗ, ಹಿಂದೂಗಳಿಗೆ ಸಂಬಂಧಿಸಿದಂತೆ ಪೋಷಕತ್ವದ ವಿಚಾರದಲ್ಲಿ ಸಮಾನತೆಯ ತತ್ವವನ್ನು ಜಾರಿಗೊಳಿಸಿ ಮಗುವಿನ ಹಿತವನ್ನಷ್ಟೇ ಮುಖ್ಯ ಎಂದು ಪರಿಗಣಿಸಲಾಗಿದ್ದನ್ನು ಸ್ಮರಿಸಬಹುದು.
ಈಗ ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರ, ಏಕರೂಪ ನಾಗರಿಕ ಸಂಹಿತೆ ರಚನೆಗೆ ಮುಂದಾಗುವುದೆ? ಎಂಬುದು ಪ್ರಶ್ನೆ. ಯಾವುದೇ ಕಾನೂನು ರಚನೆ ಸಂಸತ್‌ನ ಪರಮಾಧಿಕಾರ. ಹೀಗಿದ್ದೂ ರಾಜಕೀಯ ಪರಿಗಣನೆಗಳಲ್ಲಿ ಸರ್ಕಾರದ ಇಚ್ಛಾಶಕ್ತಿ ಸಿಲುಕಿಕೊಂಡಿರುವುದು ಈ ವಿಚಾರದಲ್ಲಿ ಸ್ಪಷ್ಟ. ಈ ವಿಚಾರ ಮುಟ್ಟದೆ ಇರುವ ನಿರ್ಧಾರವನ್ನು ಯುಪಿಎ ಸರ್ಕಾರ ಕಾಪಾಡಿಕೊಂಡುಬಂದಿತ್ತು. ಆದರೆ ರಾಷ್ಟ್ರೀಯ ಏಕತೆ ಹಾಗೂ ಲಿಂಗ ಸಮಾನತೆ ಹಿತಾಸಕ್ತಿ ದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ಈ ವಿಚಾರವನ್ನು ಸುಪ್ರೀಂಕೋರ್ಟ್ ನೆನಪಿಸುತ್ತಲೇ ಬಂದಿದೆ.
ಮುಂದಿನ ತಿಂಗಳು ಕೋರ್ಟ್‌ಗೆ ಸರ್ಕಾರ ಏನು ಉತ್ತರ ಹೇಳಲಿದೆ ಎಂಬುದರಲ್ಲಿ ಸರ್ಕಾರದ ಇಚ್ಛಾಶಕ್ತಿಯ ಪರೀಕ್ಷೆಯಾಗಲಿದೆ. ಸಾಂವಿಧಾನಿಕ ಕರ್ತವ್ಯ ನಿರ್ವಹಣೆಗಾಗಿ ಸರ್ಕಾರ ಪ್ರಯತ್ನವನ್ನಾದರೂ ಶುರು ಮಾಡಬೇಕು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಮಾತುಗಳಲ್ಲೇ ಹೇಳುವುದಾದಲ್ಲಿ ‘ತಾವು ಬದ್ಧವಾಗಿರುತ್ತೇವೆ’ ಎನ್ನುವವರಿಗಾದರೂ ಇದು ಅನ್ವಯವಾಗುವಂತಾಗಬೇಕು. ಯಾವುದೇ ವೈಯಕ್ತಿಕ ಧಾರ್ಮಿಕ ನಿಯಮಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕು ಆಯಾ ಧರ್ಮಗಳ ಜನರಿಗೆ ಲಭ್ಯವಾಗುವುದೂ ಮುಖ್ಯ. ಆಗ ಈ ವಿವಾದದ ವಾಗ್ವಾದದಲ್ಲಿ ಹೊಸದೊಂದು ಅಧ್ಯಾಯಕ್ಕೆ ನಾಂದಿಯಾಗುತ್ತದೆ