Wednesday, 7 December 2016

ಮಾನವ ಅಭಿವೃದ್ಧಿ ಸೂಚ್ಯಂಕ -2015





ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ವಿಶ್ವದ 188 ದೇಶಗಳ ಪೈಕಿ ಭಾರತ 130ನೇ ರ್ಯಾಂಕಿಂಗ್ ಪಡೆದಿದೆ.  ಯುನೈಟೆಡ್ ನೇಷನ್ಸ್ ಡೆವಲಪ್‍ಮೆಂಟ್ ಪ್ರೋಗ್ರಾಂ (ಯುಎನ್‍ಡಿಪಿ) ಬಿಡುಗಡೆ ಮಾಡಿದ ಮಾನವ ಅಭಿವೃದ್ಧಿ ವರದಿ-2015ರಲ್ಲಿ ಈ ಅಂಶ ಬಯಲಾಗಿದೆ.



ಪ್ರಮುಖ ಅಂಶಗಳು
* ಈ ವರದಿಯಲ್ಲಿ ಭಾರತ 130ನೇ ರ್ಯಾಂಕಿಂಗ್ ಪಡೆದಿದ್ದು, 0.609 ಅಂಕ ದಾಖಲಿಸಿದೆ. ಮಾನವ ಅಭಿವೃದ್ಧಿಯಲ್ಲಿ ಮಧ್ಯಮವರ್ಗದ ದೇಶಗಳ ಸಾಲಿನಲ್ಲಿ ಭಾರತ ಸೇರಿದೆ. 2014ರ ವರದಿಯಲ್ಲಿ ಭಾರ 0.586 ಅಂಕಗಳೊಂದಿಗೆ 135ನೇ ರ್ಯಾಂಕ್ ಪಡೆದಿತ್ತು.

* ದೇಶದಲ್ಲಿ ತಲಾದಾಯ ಹೆಚ್ಚಿರುವುದು ಮತ್ತು ಸರಾಸರಿ ಜೀವನಾಯುಷ್ಯ ಹೆಚ್ಚಿರುವುದು ಭಾರತದ ರ್ಯಾಂಕಿಂಗ್‍ನಲ್ಲಿ ಏರಿಕೆಗೆ ಮುಖ್ಯ ಕಾರಣಗಳು.

* ಭಾರತದಲ್ಲಿ ಹುಟ್ಟಿನ ವೇಳೆ ಜೀವಿತಾವಧಿ 68 ವರ್ಷ ಎಂದು ಅಂದಾಜು ಮಾಡಲಾಗಿದೆ. 2014ರಲ್ಲಿ ಈ ಪ್ರಮಾಣ 67.4 ವರ್ಷ ಇತ್ತು. ಇದಕ್ಕೂ ಮುನ್ನ 1980ರಲ್ಲಿ ಭಾರತದ ವ್ಯಕ್ತಿಗಳ ನಿರೀಕ್ಷಿತ ಆಯುಷ್ಯ 53.9 ವರ್ಷ ಆಗಿತ್ತು.

* ಒಟ್ಟಾರೆ ರಾಷ್ಟೀಯ ತಲಾ ಆದಾಯ (ಜಿಎನ್‍ಐ) 2014ರಲ್ಲಿ 5497 ಡಾಲರ್‍ಗೆ ಏರಿದೆ. ಹಿಂದಿನ ವರ್ಷ ಇದು 5180 ಡಾಲರ್ ಆಗಿತ್ತು. 1980ರಲ್ಲಿ ಭಾರತದ ತಲಾದಾಯ 1255 ಡಾಲರ್ ಮಾತ್ರ ಇತ್ತು. 1980ರಿಂದ 2014ರ ಅವಧಿಯಲ್ಲಿ ಭಾರತೀಯರ ತಲಾದಾಯ ಶೇಕಡ 338ರಷ್ಟು ಏರಿಕೆ ಕಂಡಿದೆ.

* ಜ್ಞಾನಲಭ್ಯತೆ: ಆದರೆ 2011ರಿಂದೀಚೆಗೆ ಮಕ್ಕಳ ಸರಾಸರಿ ಕಲಿಕಾ ವಯಸ್ಸು 11.7ರಲ್ಲೇ ನಿಂತಿದೆ. ಶಾಲೆಗೆ ಸೇರುವ ಅವಧಿ 2010ರಲ್ಲಿ 5.4 ವರ್ಷ ಇದ್ದುದು ಯಾವ ಬದಲಾವಣೆಯೂ ಆಗಿಲ್ಲ.

* ಲಿಂಗ ಅಭಿವೃದ್ಧಿ ಸೂಚ್ಯಂಕ: ಭಾರತದ ಜಿಡಿಐ ಮೌಲ್ಯ 0.795ರಷ್ಟಿದೆ. ಮಹಿಳಾ ಅಭಿವೃದ್ಧಿ ಸೂಚ್ಯಂಕವು 0.525 ಇದ್ದರೆ, ಪುರುಷರ ಅಭಿವೃದ್ಧಿ ಸೂಚ್ಯಂಕ 0.660 ಇದೆ.

* ಲಿಂಗ ಅಸಮಾನತೆ ಸೂಚ್ಯಂಕ: ಭಾರತ 155 ದೇಶಗಳ ಪೈಕಿ 0.563 ಮೌಲ್ಯದೊಂದಿಗೆ 130ನೇ ಸ್ಥಾನದಲ್ಲಿದೆ.

* ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ ಮೌಲ್ಯ 1980ರಲ್ಲಿ 0.362 ಇದ್ದುದು, 2014ರವೇಳೆಗೆ 0.609ಕ್ಕೆ ಏರಿದೆ. ಅಂದರೆ ಶೇಕಡ 68.1ರಷ್ಟು ಏರಿಕೆ ಕಂಡಿದ್ದು, ವಾರ್ಷಿಕ 1.54 ಶೇಕಡ ದರದಲ್ಲಿ ಏರಿಕೆಯಾಗುತ್ತಿದೆ.

* ಭಾರತೀಯರ ಹುಟ್ಟಿನ ವೇಳೆ ಅಂದಾಜು ಜೀವಿತಾವಧಿ 1980 ರಿಂದ 2014ರವರೆಗೆ 14.1 ವರ್ಷದಷ್ಟು ಹೆಚ್ಚಿದೆ. ಸರಾಸರಿ ಶಾಲೆಯಲ್ಲಿ ಕಲಿಕಾವಧಿ 3.5 ವರ್ಷದಷ್ಟು ಹೆಚ್ಚಿದ್ದು, ಇದೀಗ ಶಾಲೆಯಲ್ಲಿ ಕಲಿಕಾ ಅವಧಿ 5.3 ವರ್ಷದಷ್ಟು ಹೆಚ್ಚಿದೆ.

* ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೂರು ಅಗ್ರಗಣ್ಯ ದೇಶಗಳೆಂದರೆ, ಕ್ರಮವಾಗಿ ನಾರ್ವೆ, ಆಸ್ಟ್ರೇಲಿಯಾ ಹಾಗೂ ಸ್ವಿಡ್ಜರ್‍ಲೆಂಡ್.

* ಭಾರತದ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ (73), ಚೀನಾ (90), ಭೂತಾನ್ (132), ಬಾಂಗ್ಲಾದೇಶ (142), ನೇಪಾಳ (145), ಪಾಕಿಸ್ತಾನ (147), ಅಪ್ಘಾನಿಸ್ತಾನ (171).
ಬ್ರಿಕ್ಸ್ ದೇಶಗಳು: ರಷ್ಯಾ (50), ಬ್ರೆಜಿಲ್ (75), ಚೀನಾ (90), ದಕ್ಷಿಣ ಆಫ್ರಿಕಾ (116) ಮತ್ತು ಭಾರತ (130).

ಮಾನವ ಅಭಿವೃದ್ಧಿ ಸೂಚ್ಯಂಕದ ಬಗ್ಗೆ:
ಮಾನವ ಅಭಿವೃದ್ಧಿ ಸೂಚ್ಯಂಕವೆಂದರೆ, ಮೂಲಭೂತವಾಗಿ ಮಾನವ ಅಭಿವೃದ್ಧಿ ಕ್ಷೇತ್ರದಲ್ಲಿ ದೇಶ ಸಾಧಿಸಿದ ಅಭಿವೃದ್ಧಿಯಾಗಿದ್ದು, ಇದನ್ನು ಯುಎನ್‍ಡಿಪಿ ಅಧ್ಯಯನ ಮಾಡುತ್ತದೆ. ದೇಶಗಳ ಮೂರು ಪ್ರಮುಖ ಧೀರ್ಘಾವಧಿ ಪ್ರಗತಿಯ ಆಯಾಮಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಜೀವಿತಾವಧಿ ಮತ್ತು ಆರೋಗ್ಯ, ಜ್ಞಾನಲಭ್ಯತೆ ಹಾಗೂ ಶಿಷ್ಟ ಜೀವನ ಗುಣಮಟ್ಟ.




No comments:

Post a Comment