Wednesday, 7 December 2016

NO SELFI ZONE ನೋ ಸೆಲ್ಫಿ ಝೋನ್




ನೋ ಸೆಲ್ಫಿ ಝೋನ್


ರಾಜ್ಯದ 400 ತಾಣಗಳು ನೋ ಸೆಲ್ಫಿ ಝೋನ್


ಪ್ರವಾಸಿ ತಾಣಗಳಲ್ಲಿ ಮೊಬೈಲ್ ಫೋನ್ನಿಂದ ಸೆಲ್ಫಿ ಫೋಟೊ ತೆಗೆದುಕೊಳ್ಳುವ ವೇಳೆ ಆಕಸ್ಮಿಕ ಸಾವು ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸೋದ್ಯಮ ಇಲಾಖೆ ರಾಜ್ಯದ 400ಕ್ಕೂ ಅಧಿಕ ಪ್ರದೇಶಗಳನ್ನು ‘ನೋ ಸೆಲ್ಫಿ ಝೋನ್’ ಎಂದು ಘೋಷಿಸಿದೆ.

ಬೆಂಗಳೂರು ಸಮೀಪದ ನಂದಿಬೆಟ್ಟ, ಚಿಂತಾಮಣಿ ಬೆಟ್ಟ, ಗುಡಿಬಂಡೆ ಬೆಟ್ಟಗಳು ಕೂಡ ನೋ ಸೆಲ್ಫಿ ಝೋನ್ ವಲಯಗಳಾಗಿದ್ದು, ರಾಜ್ಯದ ಕರಾವಳಿ ವಲಯ, ದಕ್ಷಿಣ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಆಗುತ್ತಿರುವ ಅಪಾಯಗಳ ಕುರಿತಂತೆ ಇಲಾಖೆ ಜಾಗೃತಿ ಅಭಿಯಾನವನ್ನೂ ಆರಂಭಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳು, ನದಿಗಳು, ಸಮುದ್ರ ತೀರ, ಪ್ರವಾಸಿ ತಾಣಗಳಾಗಿರುವ ಬೆಟ್ಟ-ಗುಡ್ಡಗಳು, ಎತ್ತರದ ಪ್ರದೇಶಗಳಲ್ಲಿರುವ ದೇವಸ್ಥಾನಗಳು, ಟ್ರೆಕ್ಕಿಂಗ್ ತಾಣಗಳು ಹೀಗೆ ಪ್ರವಾಸಿಗರು ತೆರಳುವ ಕೇಂದ್ರಗಳಲ್ಲಿ ಅದರಲ್ಲೂ ನೈಸರ್ಗಿಕ ತಾಣದ ಪ್ರದೇಶಗಳಲ್ಲಿ ಸೆಲ್ಫಿಯಿಂದಾಗಿ ಅಪಾಯ ಸಂಭವಿಸದಂತೆ ‘ನೋ ಸೆಲ್ಫಿ ಝೋನ್’ ಫಲಕಗಳನ್ನು ಇಲಾಖೆ ಅಳವಡಿಸುತ್ತಿದೆ. ಈ ಫಲಕಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿವೆ. ಇನ್ನೂ ಕೆಲವೆಡೆ ಚಿತ್ರಗಳೇ ಅಪಾಯವನ್ನು ಒತ್ತಿ ಹೇಳುವ ಫಲಕಗಳನ್ನೂ ಅಳವಡಿಸಲಾಗಿದೆ.

ವಿಶೇಷವೆಂದರೆ, ಫೋಟೊಗಳನ್ನು ತೆಗೆಯಬಹುದಾದ ತಾಣಗಳಲ್ಲಿ ‘ಇಲ್ಲಿ ಫೋಟೊಗಳನ್ನು ತೆಗೆಯಬಹುದು’ ಎಂಬ ಫಲಕಗಳನ್ನೂ ಅಳವಡಿಸಿ, ಪ್ರವಾಸೋದ್ಯಮ ಉತ್ತೇಜನಕ್ಕೆ ಗಮನ ನೀಡಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಸೆಲ್ಫಿ ಸಾವು
•  ವಿಶ್ವದ ಅಂಕಿ ಅಂಶಗಳನ್ನು ನೋಡಿದರೆ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಅತಿ ಹೆಚ್ಚು ಸಾವು ಸಂಭವಿಸಿದ ನಗರ ದೆಹಲಿ ಎಂದು ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯ ಮತ್ತು ದೆಹಲಿಯ ಇಂದ್ರಪ್ರಸ್ಥ ಮಾಹಿತಿ ಸಂಸ್ಥೆಯ ಸಂಶೋಧನಾ ವರದಿ ತಿಳಿಸಿದೆ.
•   ಸೆಲ್ಫಿ ತೆಗೆಯುವಾಗ ಸಾವಿಗೀಡಾದವರ ಒಟ್ಟು ಸಂಖ್ಯೆ 127. ಅದರಲ್ಲಿ ಭಾರತದ ಪಾಲು 76. ಪಾಕಿಸ್ತಾನದಲ್ಲಿ 9. ಅದು 2ನೇ ಸ್ಥಾನದಲ್ಲಿದೆ.
•  ಅಮೆರಿಕ (8), ರಷ್ಯಾ(6), ಫಿಲಿಫೈನ್ಸ್ ಮತ್ತು ಚೀನಾ (ತಲಾ4), ಸ್ಪೇನ್ (3), ಪೋರ್ಚುಗಲ್, ಇಂಡೋನೇಷ್ಯಾ, ಪೆರು ಮತ್ತು ಟರ್ಕಿ (ತಲಾ2), ರೋಮೇನಿಯಾ, ಆಸ್ಟ್ರೇಲಿಯಾ, ಮೆಕ್ಸಿಕೊ, ದಕ್ಷಿಣ ಆಫ್ರಿಕ, ಇಟಲಿ, ನೇಪಾಳ, ಸರ್ಬಿಯಾ, ಚಿಲಿ ಮತ್ತು ಹಾಂಗ್‍ಕಾಂಗ್‍ಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.

ಆಕ್ಸ್ ಫರ್ಡ್ ಪದಕೋಶದಲ್ಲಿ ‘ಸೆಲ್ಫಿ’
2013ರ ವರ್ಷದ ಪದವಾಗಿ ಆಕ್ಸ್‍ಫರ್ಡ್ ಪದಕೋಶದಲ್ಲಿ ಸೇರ್ಪಡೆ ಆಗಿತ್ತು. ಸೆಲ್ಫಿ ಪದದ ಅರ್ಥ ಹೀಗಿದೆ. ಒಬ್ಬ ವ್ಯಕ್ತಿ ತನ್ನ ಚಿತ್ರವನ್ನು ಸ್ವಯಂ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವುದು.




No comments:

Post a Comment